A)
ತಿರುವಳ್ಳುವರು
ತಿರುವಳ್ಳುವರು ಬಾಳಿ ಬದುಕಿದ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಇಂದು ಯಾವುದೇ
ನಿರ್ದಿಷ್ಟ ಆಧಾರಗಳಾಗಲೀ ಇಲ್ಲ. ಅವರ ಜನನ, ಕುಲ, ಕಸುಬು, ಧರ್ಮ, ಕಾಲ ಮೊದಲಾದವುಗಳನ್ನು
ಹಲವಾರು ರೀತಿಯಲ್ಲಿ ಹೇಳಬಹುದಾಗಿರುವುದರಿಂದ, ಎಲ್ಲರೂ ಒಪ್ಪುವಂತಹ ಸಾಮಾನ್ಯ ಸಂಗತಿಯನ್ನು
ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ.
ವಳ್ಳುವರ ಜೀವನ ಚರಿತ್ರೆಯ ಸಂಗತಿಗಳು, ತಿರುವಳ್ಳುವರ್ ಮಾಲೆ, ಜ್ಞಾನಾಮೃತ, ಕಪಿಲರ್
ಅಗವಲ್, ಪುಲವರ್ ಪುರಾಣಂ, ತಮಿಳರ್ ನಾವಲರ್ ಚರಿತ್ರೆ ಮೊದಲಾದವುಗಳಲ್ಲಿ ದೊರೆಯುತ್ತದೆ.
ತಿರುವಳ್ಳುವರ ಮಲ್ಲೆಯಲ್ಲಿ ಇವರನ್ನು ಚತುರ್ಮುಖ ಬ್ರಹ್ಮನ ಅವತಾರವೆಂದೂ, ಸರಸ್ವತಿಯೇ
ನುಡಿಸಿದಳೆಂದೂ ಹೇಳುತ್ತಾರೆ. ವಳ್ಳುವರು ನೇಯ್ಗಾರರಾಗಿದ್ದರು. ಪರಶಿವನೇ ತನ್ನ
ಊರ್ದ್ವತಾಂಡವ ನೃತ್ಯದ ಬಗೆಗೆ ತಿಳಿಯ ಹೇಳಿದರೊಂದೂ ಅದನ್ನು ತಮಿಳುಛಂದಸ್ಸಾದ 'ಪೂವಿಲ್
ಆಯಿನನುಮ್' ಎನ್ನುವ ವೆಣ್ಬಾದಲ್ಲಿ ಹಾಡಿದರೆಂದು ಪ್ರತೀತಿ. 'ಎಲೆಲ್ಲಸಿಂಗನ್' ಎನ್ನುವ
ಸಮುದ್ರ ವ್ಯಾಪಾರಿ ತಿರುವಳ್ಳುವರ ಶಿಷ್ಯನಾಗಿ ಅವರು ಹೇಳಿದಂತೆ ನಡೆದನೆಂದೂ ಕೆಲವು
ಅದ್ಭುತಗಳನ್ನುತೋರಿದನೆಂದೂ ಹಲವಾರು ಪ್ರತೀತಿಗಳಿವೆ.
'ಪಲವರ್ ಪುರಾಣಂ' ಮತ್ತು 'ಕಪಿಲರ ಅಗವಲ'ದಲ್ಲಿ ತಿರುವಳ್ಳುವರು ಭಗವನ್ ಮತ್ತು ಆದಿ
ಎನ್ನುವ ತಂದೆ ತಾಯಿಯರಿಗೆ ಜನಿಸಿದರೆಂದು ಹೇಳುತ್ತವೆ. ವಳ್ಳುವರ್ ಮದರಾಸಿನ (ಸೆನ್ನೈ)
ಮಯಿಲಾಪುರದಲ್ಲಿ ವಾಸಿಸುತ್ತಿದ್ದರೆಂದು ಮತ್ತೊಂದು ಇತಿಹಾಸ. ತಿರುವಳ್ಳುವರ್ ಮಾಲೆಯಲ್ಲಿ
ವಳ್ಳುವರು ಮದುರೆಯಲ್ಲಿದ್ದರೆಂದು ಹೇಳುತ್ತಾರೆ. ವಾಸುಕಿ ಎಂಬ ಪತ್ನಿಯನ್ನು
ಹೊಂದಿದ್ದರೆಂದೂ, ಪತ್ನಿಯನ್ನು ಹಲವಾರು ಪರೀಕ್ಷೆಗಳಿಂದ ಪ್ರಕಾಶಗೊಳ್ಳುವಂತೆ ಮಾಡಿದರೆಂದೂ
ಕೆಲವು ಕತೆಗಳಿವೆ.
ಆ ಕಾಲದಲ್ಲಿ 'ಮಧುರೆ' ತಮಿಳು ಸಾಹಿತ್ಯದ ಕೇಂದ್ರವಾಗಿದ್ದಿತು. ಪ್ರಸಿದ್ಧ ತಮಿಳು
ಸಾಹಿತಿಗಳು ಹಲವರು ಅಲ್ಲಿದ್ದರು. ತಿರುವಳ್ಳುವರು ತಮ್ಮ ಗ್ರಂಥವನ್ನು ಮಧುರೆಗೆ
ತೆಗೆದುಕೊಂಡು ಹೋಗಿ ಅಲ್ಲಿಯ 'ತಮಿಳು ಸಂಘ'ದಲ್ಲಿ ಅದನ್ನು ಗೌರವಿಸುವಂತೆ ಕೇಳಿದರೆಂದೂ,
ಇತರ ಕವಿಗಳು ಅದನ್ನು ಕೀಳೆಂದು ತಳ್ಳಿಬಿಟ್ಟರೆಂದೂ ಅನಂತರ ಸಂಘದ ಗೌರವ ಸ್ಥಾನದಲ್ಲಿ
ಅದನ್ನೂ ಇರಿಸಲು ಆ 'ಮಹಾ ಶಕ್ತ್ಯಾಸನ'ವು 'ಕುರಳ್' ಒಂದನ್ನು ಮಾತ್ರ ಇರಿಸಿಕೊಂಡು ಉಳಿದ
ಗ್ರಂಥಗಳನ್ನು ತಿರಸ್ಕರಿಸಿತೆಂದೂ ಮತ್ತೊಂದು ದಂತ ಕಥೆ. ವಳ್ಳುವರು ತಮ್ಮ ಪತ್ನಿಯು ಮರಣ
ಹೊಂದಿದಾಗ ಬಹಳ ದುಃಖಿತರಾಗಿ 'ಅಡಿಸಿರ್ಕಿನಿಯಾಳೇ' ಎಂದು ಹಾಡಿದರಂತೆ.
ವಳ್ಳೂವರು ಯಾವ ಪಂಥಕ್ಕೆ ಸೇರಿದವರೆಂಬುದರ ಬಗೆಗೆ ಹಲವಾರು ಊಹಾಪೋಹಗಳೂವಾದ ವಿವಾದಗಳೂ ಇವೆ.
ಕೆಲವರು ಈ ಆಧಾರದಿಂದ ಇವರು ವೈಷ್ಣವರೆಂದೂ ಮತ್ತೆ ಕೆಲವರು ಶಿವಭಕ್ತರೆಂದೂ ಜೈನರೆಂದೂ,
ಕ್ರೈಸ್ತ ಶಿಷ್ಯರೊಂದಿಗೆ ಸಂಬಂಧ ಕೊಂದಿದ್ದರೆಂದೂ, ಕುರಳನ್ನೂ ಉದಾಹರಿಸಿ ಹೇಳುತ್ತಾರೆ.
ವಳ್ಳುವರ ಜನ್ಮ, ಹುಟ್ಟು, ಧರ್ಮದ ಬಗ್ಗೆ ಒಮ್ಮ ತವಿಲ್ಲದಿರುವಂತೆ ಇವರು ವಾಸಿಸಿದ ಸ್ಥಳ,
ಜನಿಸಿದ ಊರು ಮೊದಲಾದುವುಗಳನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲ. 'ಮಣಿ ಮೇಖಲೆ' ಎಂಬ
ಗ್ರಂಥದಲ್ಲಿ ವಳ್ಳುವರ ವಿಷಯಗಳು ಹೆಚ್ಚುಹೆಚ್ಚಾಗಿ ಬಂದುದರಿಂದ ಇದು 'ಮಣಿ ಮೇಖಲೆ'ಗೆ
ಪೂರ್ವ ಗ್ರಂಥ ಎಂದು ಎಲ್ಲರ ಅಭಿಮತ. ಮಾಂಸಹಾರ ನಿಷೇಧ, ಪ್ರಾಣಿ ಹಿಂಸೆ ಮೊದಲಾದವುಗಳು ಆ
ಕಾಲದ ತಮಿಳು ಗ್ರಂಥದಲ್ಲಿ ದೊರೆಯುವುದಿಲ್ಲ. ಇದರಿಂದ ಉತ್ತರದ ಪ್ರಭಾವ ಇವರ ಮೇಲೆ
ಇದ್ದಿತೆಂಬುದು ನಿರ್ವಿವಾದ. ಆ ಕಾಲದಲ್ಲಿ ಮಧುರೆಯಲ್ಲಿ ವಾಸಿಸುತ್ತಿದ್ದ ಜೈನರು ತಮ್ಮ
ಪ್ರಭಾವವನ್ನು ಬೇರಿದ್ದರೆಂಬುದನ್ನು ಒಪ್ಪಬಹುದಾಗಿದೆ. ಮಧುರೆಯಲ್ಲಿ ಜೈನರು
ವಾಸಿಸುತ್ತಿದ್ದ ಕಾಲವನ್ನು ಕ್ರಿ. ಶ. ಎರಡನೇ ಶತಮಾನದ ಪ್ರಾರಂಭವೆಂದು ಹೇಳುತ್ತಾರೆ.
ವಳ್ಳುವರು ಜೈನರೆಅಮ್ದೂ, ಹೇಳುವವರೂ ತಿರುಕ್ಕುರಳಿನ ಕೆಲವು ಉದಾಹರಣೆಗಳನ್ನು ಕೊಟ್ಟು
ವಾದಿಸುತ್ತಾರೆ. ಒಂದು ಧರ್ಮದ ಇಕ್ಕಳದಲ್ಲಿ ಸಿಲಕಿಸುವುದಕ್ಕಿಂತ ಸರ್ವಧರ್ಮ ಸಮ್ಮತವಾದ
ತತ್ವವನ್ನು ನಿರೂಪಿಸಿರುವರೆಂಬುದು ನಿರ್ವಿವಾದವಾದ ವಿಷಯ.
ವಳ್ಳುವರ ಹೆಸರಿನಲ್ಲಿರುವ ಏಕಮೇವ ದೇವಾಲಯದಲ್ಲಿ ವಳ್ಳುವರಿಗೆ ಶೈವಾಗಮ ರೀತಿ ಪೂಜೆ
ನಡೆಯುತ್ತಿದೆ. ಕವಿಗಳಿಗೆ ಲಭ್ಯವಾಗಿರುವ ಕೀರ್ತಿ ಇವರಿಗೆ ಮಾತ್ರ. ಆದುದರಿಂದ ಯಾವ ತಮಿಳು
ಕವಿಗೂ ದೊರೆಯದ ಗೌರವವನ್ನು ವಳ್ಳುವರು ಪಡೆದಿದ್ದಾರೆ. ತಿರುಕ್ಕುರಳನ್ನು ಧರ್ಮಗ್ರಂಥದ
ಪಂಕ್ತಿಗೆ ಸೇರಿಸುತ್ತಾರೆ. ತಿರುಕ್ಕುರಳಿನ ಮೊದಲಿನ ೩೮ ಅಧಿಕಾರಗಳು ಧರ್ಮದ ವಿಷಯವಾಗಿಯೇ
ಬೋಧಿಸುವುದರಿಂದ ಧರ್ಮಗ್ರಂಥಗಳ ಪಂಕ್ತಿಯಲ್ಲಿ ಪ್ರಾಧಾನ್ಯತೆ ಪಡೆದಿದೆ.
ದಿನನಿತ್ಯದ ಊಟ ಉಪಚಾರಗಳಿಂದ ರಾಜ್ಯಾಡಳಿತ, ಹೊರನಾಡ ಸಂಬಂಧದವರಿವಿಗೆ ಚರ್ಚಿಸುವ,
ತಿಳಿಯಾಗಿ ಹೇಳಿರುವ ಕುರಳ್ ಒಂದು ಜ್ಞಾನ ಸಾಗರ. ಕೀರ್ತಿ ಹಿಮಾಲಯದಷ್ಟು ಹಿರಿಯದು. ಎಂದೂ
ಕಳಂಕ ಕಾಣದ ಕತ್ತಲರಿಯದ ಇದರ ಪ್ರತಿಪಂಕ್ತಿಯೂ ಒಂದು ನೀತಿಯನ್ನು ಪ್ರತಿಪಾದಿಸುತ್ತದೆ.
ಸಾಹಿತ್ಯ ಕಲೆ, ಧರ್ಮ, ನೀತಿ ಇವುಗಳು ಎಂದೂ ಒಂದೇ ಜನಾಂಗಕ್ಕಾಗಲಿ, ಒಂದೇ ದೇಶಕ್ಕಾಗಲಿ
ಮೀಸಲಾದವುಗಳಲ್ಲ. ಅವು ವಿಶ್ವದ ಎಲ್ಲಾ ಪ್ರಜೆಗಳಿಗೂ ಸೇರಿದುದು. ಜನತೆಯ ಒಳಿತಿಗಾಗಿ
ರಚಿಸಿದ ಮಹಾ ಕೃತಿಗಳು. ಧರ್ಮದ ಮೂಸಯಲ್ಲಿ ಹುಟ್ಟಿಬಂದ ಅಣಿಮುತ್ತುಗಳು. ಅಂತಹ ಅಕಳಂಕ
ಮುತ್ತುಗಳನ್ನು ಓದಿ ಆನಂದಿಸುವುದರ ಜೋತೆಗೆ ಆಚರಣೆಗೆ ತರುವುದರಲ್ಲಿಯೇ ಅವುಗಳ ಉಪಯೋಗವಿದೆ.
ಇಂತಹ ಮೇರು ಕೃತಿಯೊಂದನ್ನು ಜನತೆಗಿತ್ತು ಕೃತಾರ್ಥರಾಗಿದ್ದಾರೆ.
B.
ತಿರುಕ್ಕುರಳ್
'ಶ್ರೀ' ಮತ್ತು 'ಶ್ರೀಮತಿ' ಎಂಬ ಗೌರವಾರ್ಥಪದಗಳನ್ನು
ತಮಿಳಿನಲ್ಲಿ 'ತಿರು' ಮತ್ತು 'ತಿರುಮತಿ' ಎಂದು ಉಪಯೋಗಿಸುತ್ತಾರೆ. "ಕುರಳ್" ಈ
ಗ್ರಂಥದಲ್ಲಿ ವಳ್ಳುವರು ಬಳಸಿರುವ ಛಂದಸ್ಸಿನ ಹೆಸರು. ಕುರಳ್ ಎಂದರೆ ಚಿಕ್ಕದು, ಗುಜ್ಜಾರಿ,
ವಾಮನ, ಪುಟ್ಟದು, ಎಂದು ಅರ್ಥ. ಎರಡನ್ನೂ ಸೇರಿಸಿ ತಿರು+ಕುರಳ್=ತಿರುಕ್ಕುರಳ್ ಎಂದು
ಹೆಸರನ್ನು ಇಟ್ಟಿದ್ದಾರೆ. ವಿಶ್ವವಿದ್ಯಾನಿಯಗಳಲ್ಲಿ ತಿರುಕ್ಕುರಳ್ ಸಂಶೋದನೆಗಾಗಿ ಅಪಾರ
ವೆಚ್ಚದಿಂದ ಹಲವಾರು ಯೋಜನೆಗಳು ಕಾರ್ಯಗತವಾಗಿ, ಹೊಸಹೊಸಗ್ರಂಥಗಳು ಹೊರಬರುತ್ತಿವೆ. ಕುರಳ್
ಗ್ರಂಥಕ್ಕೆ ಮೆರಗು ಹಚ್ಚುವುದಕ್ಕಾಗಿ ಇಲ್ಲದ ಸಲ್ಲದ ಗೌರವವನ್ನು ನೀಡುತ್ತಿದ್ದಾರೆ
ಎನ್ನುವುದಕ್ಕಿಂತ ಗ್ರಂಥದ ಪ್ರಚಾರ ಇನ್ನೂ ಆಗಬೇಕಾಗಿದೆ ಎನ್ನುವುದು ಗ್ರಂಥವನ್ನು ಒಂದು
ಸಾರಿ ಪೂರ್ತಿ ಓದಿದವರು ಅಭಿಪ್ರಾಯ ಪಡುವ ಸಹಜ ತೀರ್ಮಾನ.
ತಿರುಕ್ಕುರಳಿನಲ್ಲಿ ೩ ಭಾಗಗಳಿವೆ. ಧರ್ಮ, ಅರ್ಥ ಮತ್ತು ಕಾಮ ಒಟ್ಟು ೧೩೩ ಅಧಿಕಾರಗಳು,
ಒಂದೊಂದು ಅಧಿಕಾರದಲ್ಲಿಯೂ ೧೦ ಕುರಳಿನಂತೆ ೧೩೩೦ ಪದ್ಯಗಳಿವೆ. ಒಂದೊಂದು ಕುರಳೂ ಸರ್ವಜ್ಞ್
ವಚನದ ಸುಮಾರು ಅರ್ಧದಷ್ಟಿದೆ. ಅರ್ಥಪೂರ್ಣವಾಗಿದೆ "ಆಡು ಮುಟ್ಟದ ಸೊಪ್ಪಿಲ್ಲ" ಎಂದು
ಹೇಳುವಂತೆ ಇವರು ಹೇಳದ ವಿಷಯವಿಲ್ಲ.
ಜೀವಿತ ಕಾಲದಲ್ಲಿ ಮಾನವನು ಸಾಧಿಸುವ ಗುರಿಯನ್ನು ಪುರುಪಾರ್ಥಗಳೆನ್ನು ತೇವೆ. ಅವುಗಳು
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ, ಸಾಧಾರಣವಾಗಿ ಒಂದು ಇನ್ನೊಂದರ ಆಚರಣೆಗೆ ಪೂರಕ.
ಮೊದಲನೆಯ ಮೂರನ್ನು ಸರಿಯಾಗಿ ಪರಿಪಾಲಿಸದರೆ ನಾಲ್ಕನೆಯದು ತಾನೇ ತಾನಾಗಿ ಕೈಗೊಡುವುದೆಂದು
ಮೋಕ್ಷಭಾಗವನ್ನು ಬಿಟ್ಟಿದ್ದಾರೆ ಎಂಬುದು ಕೆಲವರ ಮಾತ. ಮೊದಲಮೂರು ಭಗಗಳನ್ನು
ಅರತ್ತುಪ್ಪಾಲ್- ಧರ್ಮಭಾಗ, ಪೊರುಟ್ಪಾಲ್- ಅರ್ಥ ಭಾಗ, ಕಾಮತ್ತುಪ್ಪಾಲ್- ಕಾಮಭಾಗ, ಎಂದು
ವಿಭಜಿಸಿ ಕೊಂಡಿದ್ದಾರೆ. ಮೊದಲನೆಯ ಧರ್ಮಭಾಗದಲ್ಲಿ ೩೮ ಅಧಿಕಾರಗಳೂ ಎರಡನೆಯ
ಅರ್ಥಭಾಗದಲ್ಲಿ ೭೦ ಅಧಿಕಾರಗಳೂ ಮೂರನೆಯ ಕಾಮಭಾಗದಲ್ಲಿ ೨೫ ಅಧಿಕಾರಗಳೂ ಇವೆ. ಲೋಕ
ವ್ಯವಹಾರಕ್ಕೆ ಅಗತ್ಯವಾದ ಅರ್ಥಭಾಗವನ್ನೇ ಒತ್ತಿ ಹೇಳಿದ್ದಾರೆ.
ಧರ್ಮಭಾಗದಲ್ಲಿ ಅವರು ಹಿರಿಯ ಪೂರ್ವಕಾವ್ಯಗಳಂತೆ ಪ್ರಾರ್ಥನೆಯಿಂದ ಆರಂಭಿಸಿ, ಮಳೆ ಧರ್ಮ,
ಗೃಹಧರ್ಮ, ಉಪಕಾರ, ನೆನೆಯುವುದು, ದುರಾಸೆ, ದಾನೆ, ಕರುಣೆ, ತಪಸ್ಸ್ಯ, ಅಹಿಂಸೆ, ತ್ಯಾಗ,
ಸತ್ಯವಚನ ಮೊದಲಾದವುಗಳನ್ನು ನೆನೆದು ಮಾನವನು ಹೇಗೆ ಧಾರ್ಮಿಕನಾಗಿರಬೇಕು, ಧರ್ಮದ
ಮಾರ್ಗವನ್ನು ಅನುಸರಿಸುವುದರಿಂದ ಅವರವರ ಜೀವನ ಹೇಗೆ ಸುಖಮಯವಾಗುತ್ತದೆ ಲೋಕಕ್ಷೇಮಕ್ಕಾಗಿ
ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಭಾರತೀಯರು ಪುರುಷಾರ್ಥಗಳಲ್ಲಿ ಧರ್ಮಕ್ಕೆ ಏಕೆ ಮೊದಲ ಸ್ಧಾನವನ್ನು ಕೊಟ್ಟಿದ್ದಾರೆ. ಎಲ್ಲಾ
ಸುಖಗಳನ್ನೂ ಕೊಡುವುದು ಅರ್ಥ, ಅರ್ಥದಿಂದ ಕಾಮ, ಹೀಗಿರುವಾಗ ಕಠಿಣಮಾರ್ಗವಾದ ಧರ್ಮವನ್ನು
ಮೊದಲನೆಯದಾಗಿ ಏಕೆ ಮಾಡಿದ್ದಾರೆ? ಮನುಷ್ಯನು ಯಾವುದು ಸರಿ ಯಾವುದು ತಪ್ಪು ಎಂಬ
ಗೋಚರವಿಲ್ಲದೆ ಪ್ರಾಣಿಗಳಿಗೆ ಸಮನಾಗಿ ವ್ಯವಹರಿಸುವಾಗ "ಅರ್ಥ" "ಕಾಮ"ಗಳಲ್ಲಿಯೇ
ತೊಡಗುತ್ತಾನೆ. ಮನುಷ್ಯನು ಪ್ರಾಣಿಗಳಂತೆಯೇ ವ್ಯವಹರಿಸುವುದಾದರೆ ಮಾನವನಿಗೆ ಇರುವ
ವ್ಯತ್ಯಾಸವಾದರೂ ಏನು? ಮನುಷ್ಯ ಪ್ರಾಣಿಗಳಾದಿಯಾಗಿಎಲ್ಲರೂ ಬಯಸುವುದೂ ಸುಖವನ್ನೇ,
ಸುಖಪಡೆಯು ಲೋಸುಗವೇ ಮಾನವ ಜನ್ಮ ತಾಳುವುದು. ಹೊಳೆಯಲ್ಲಿ ಹರಿಯುವ ನೀರು ತನ್ನ
ಮಾರ್ಗದಲ್ಲಿ ಹರಿದಾಗ ಎಲ್ಲರಿಗೂ ಉಪಯೋಗವಾಗಿ ದಡದಲ್ಲಿ ಸಮೃದ್ಧವಾದ ತೆಂಗು, ಕಂಗು,
ಬಾಳೆಯಗಿಡಗಳಿಂದ ಶೋಭಿಸುತ್ತಾ ಕಂಗೊಳಿಸುತ್ತಿರುತ್ತದೆ. ಆದರೆ ಅದು ಗೊತ್ತು ಗುರಿ ಇಲ್ಲದೆ
ದಿನಕ್ಕೊಂದು ಮಾರ್ಗದಲ್ಲಿ ಪ್ರವಹಿಸಿದರೆ ಬೆಳೆದಿರುವ ತೋಟವನ್ನೂ ಬೆಳೆಯನ್ನೂ ನೆಲಸಮ
ಮಾಡಿಬಿಡುತ್ತದೆ. ಹಾನಿ ತರುತ್ತದೆ. ಅದುದರಿಂದ "ಅರ್ಥ" "ಕಾಮ"ಗಳು ಸರಿಯಾದ ರೀತಿಯಲ್ಲಿ
ಉಪಯೋಗವಾಗುವಂತೆ ಅದನ್ನು "ಧರ್ಮ" ಮತ್ತು "ಮೋಕ್ಷ"ದ ಮದ್ಯದಲ್ಲಿ ಹೊಂದಿಸಿದ್ದಾರೆ. ಧರ್ಮ
ಮತ್ತು ಮೋಕ್ಷಗಳು ಮೊದಲು ಮತ್ತು ಕಡೆಯಲ್ಲಿದ್ದು ಆನೆಯನ್ನು ಪಳಗಿಸಲು ಕಾಡಾನೆಗಳ
ಪಕ್ಕದಲ್ಲಿ ಊರಾನೆಯನ್ನು ಹೊಂದಿಸಿದಂತೆ, ಅಂಕುಶದಂತೆ ಕೆಲಸ ಮಾಡುತ್ತಾ ನಾಲ್ಕು
ಪುರುಷಾರ್ಥಗಳನ್ನು ಕ್ರಮಕ್ರಮವಾಗಿ ಸಾಧಿಸುವ ಮಾರ್ಗ ತೋರಿದ್ದಾರ್.
ಧರ್ಮವೆಂದರೇನು? ಎಂಬುದನ್ನು ಅರಿತವರು ಧರ್ಮರೀತಿಯಲ್ಲಿ ಅರ್ಥಸಂಪಾದನೆ ಮಾಡುತ್ತಾರೆ.
ಧರ್ಮವೂ ಅರ್ಥವೂ ಬೆರೆತ ಕಾಮವನ್ನು ಅನುಭವಿಸುವುದರಿಂದ ಲೋಕಕ್ಕೂ ಒಳಿತು ಅವರಿಗೂ
ಒಳಿತಾಗುತ್ತದೆ. ಅಂತಹ ಕಾಮ ಅಥವಾ ಸುಖ ಬಹುದಿನ ಇರಬಲ್ಲದು ಅಂತಹ ನಿಜವಾದ ಸುಖವನ್ನು
ಅನುಭವಿಸಲು ಧರ್ಮ ಮತ್ತು ಅರ್ಥವನ್ನು ಸರಿಯಾದ ರೀತಿಯಲ್ಲಿ ಅರಿತು ಸಂಪಾದಿಸಿರಬೇಕು. ಹೀಗೆ
ಧರ್ಮ ರೀತಿಯಲ್ಲಿ ಕಾಮವನ್ನು ಪಡೆದವರು ಮೋಕ್ಷಕ್ಕೆ ಅರ್ಹರಾಗುತ್ತಾರೆ.
ಧನವನ್ನು ಸಂಪಾದಿಸುವುದು ಕಷ್ಟ, ಸಂಪಾದಿಸಿದುದನ್ನು ಸುಭದ್ರವಾಗಿ ಇರಿಸುವುದು ಇನ್ನೂ
ಕಷ್ಟ. ಅದನ್ನು ಸರಿಯಾಗಿ ಅನುಭವಿಸುವುದರಲ್ಲಿ ಇನ್ನೂ ವಿವೇಚನೆ ಇರಬೇಕಾಗುತ್ತದೆ. ಧನವೇ
ಸುಖದುಃಖಗಳ ಮೂಲವಾಗುತ್ತದೆ. ಧನದ ಪ್ರಭಾವದಿಂದ ಮಾನವನು ಮೋಕ್ಷವನ್ನು ಮರೆತು ಬರೀ
ಧನಾರ್ಜನೆಯಲ್ಲಿಯೇ ತೊಡಗುವಂತೆ ಮಾಡಿಬಿಡುತ್ತದೆ. ಎಲ್ಲದಕ್ಕೂ ಧನವೇ ಮೂಲ. ಅದನ್ನೂ
ಸಂಪಾದಿಸುವ ಧಾರ್ಮಿಕ ಮಾರ್ಗಗಳನ್ನೂ ನ್ಯಾಯವಾಗಿ ಅನುಭವಿಸಬಹುದಾದ ಮಾರ್ಗಗಳನ್ನೂ ಮಾತ್ರ
ವಳ್ಳುವರು ಒತ್ತಿ ಹೇಳಿದ್ದಾರೆ.
ಮೂರನೆಯದಾದ ಕಾಮ ಭಾಗದಲ್ಲಿ ೨೫ ಅಧಿಕಾರಗಳಿವೆ. ಮೊದಲ ಆರು
ಅಧಿಕಾರಗಳನ್ನು ಗಾಂಧರ್ವರೀತಿಯ ವಿವಾಹವಾಗುವುದರಿಂದ ಏರ್ಪಡುವ ಬಯಕೆಗಳನ್ನೂ ಉಳಿದ
ಅಧಿಕಾರಗಳಲ್ಲಿ ಪತಿದೂರಹೋದಾಗ ಪತ್ನಿಯ ಹೇಗೆ ಕೊರಗುತ್ತಾಳೆ ಎಂಬುದನ್ನು
ಮುಖ್ಯವಾಗಿರಿಸಿಕೊಂಡು ಕಾವ್ಯಮಯವಾಗಿ "ವಿರಹ"ವನ್ನು ವರ್ಣಿಸಿದ್ದಾರೆ. ಭಾರತೀಯರು ಶರೀರ
ಸಂಬಂಧವನ್ನು ಕ್ಷಣಿಕ ಸುಖವಾಗಿ ಪರಿಗಣಿಸದೆ ಅದನ್ನು ಸಂತಾನೋತ್ಪತ್ತಿಗಾಗಿ ನಡೆಸಬೇಕಾದ
ಮಹತ್ಕಾರ್ಯವೆಂದು ಭಾವಿಸಿ ಗೌರವದಿಂದ ಕಂಡಿದ್ದಾರೆ. ಸಂತಾನ ವಿಜ್ಞಾನದ ಬಗೆಗೆ ಹೇಳದೆ
ಕಾಮವನ್ನೇ ವಿವರಿಸಿದ್ದಾರೆ. ಕೆಲವು ಅಧಿಕಾರಗಳಲ್ಲಿ ಅಭಿಪ್ರಾಯಗಳು ಪುನರಾವರ್ತನೆಯಾದಂತೆ
ಭಾಸವಾಗುತ್ತದೆ. ಏರುವಯಸ್ಸಿನವರಿಗೆ ಆಕರ್ಷಕ ವಾಗಿಯೂ ಮಧ್ಯಹಾಗೂ ಇಲಿವಯಸ್ಸಿನವರಿಗೆ
ಸ್ವಲ್ಪ ನೀರಸವಾಗಿಯೂ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ.
"ಕುರಳ್" ಎನ್ನುವ ಛಂದಸ್ಸಿನಿಂದ ಉಂಟಾಗಿರುವ ಗ್ರಂಥ ಇದೊಂದೆ. ತಮಿಳು ವರ್ಣಮಾಲೆಯ "ಆ"ಕಾರದಿಂದ
ಪ್ರಾರಂಭವಾಗಿ ಕೊನೆಯ ಅಕ್ಷರವಾದ "ನ"ದಿಂದ ಮುಕ್ತಾಯವಾಗುತ್ತದೆ. ಹಲವಾರು ವಿದ್ವಾಂಸರು ಈ
ಗ್ರಂಥಕ್ಕೆ ಬಾಷ್ಯಗಳನ್ನು
ಬರೆದಿರುತ್ತಾರೆ. ಬೇರೆ ಯಾವ ತಮಿಳು
ಗ್ರಂಥಕ್ಕೂ ದೊರೆಯದ ಗೌರವ, ಆದರ, ಮನ್ನಣೆಗಳು ಇದಕ್ಕೆ ದೊರೆತಿದೆ. "ತಿರುವಳ್ಳುವರ್ ಮಾಲೆ"
ಯಂತಹ ಸ್ತೋತ್ರ ಮಾಲೆಗಳೂ ಬೇರೆ ಗ್ರಂಥಗಳಿಲ್ಲ. ಎಲ್ಲಾ ಧರ್ಮದವರೂ ಇದನ್ನು ತಮ್ಮದೇ
ಗ್ರಂಥವೆಂದು ಪರಿಗಣಿಸುತ್ತಾರೆ. ಇತರ ಭಾಷೆಗಳಲ್ಲಿಯೂ ಸಹ ತಿರುಕ್ಕುರಳ್ಗೆ
ದೊರೆತಿರುವಷ್ಟು ಗೌರವ ತಮಿಳಿನ ಬೇರೆ ಗ್ರಂಥಗಳಿಗೆ ದೊರೆತಿಲ್ಲ. ಇದು ನೀತಿ ಗ್ರಂಥವೆಂಬ
ಕೀರ್ತಿಯನ್ನೂ ಪಡೆದಿದೆ.
ಇಂತಹ ಮಹಾಕೃತಿಯನ್ನು ತಮಿಳು ಸಾಹಿತ್ಯಕ್ಕಿತ್ತು ತಮಿಳು ಸಾಹಿತ್ಯದ ಸ್ಥಾನವನ್ನು ಉನ್ನತ
ಮಟ್ಟಕ್ಕೇರಿಸಿದ ಕೀರ್ತಿ ವಳ್ಳುವರಿಗೆ ಸೇರಿದುದು. ತಮಿಳು ವೇದವೆಂದರೆ ತಿರುಕ್ಕುರಳ್
ಎಂಬುದು ಸರ್ವರ ಮತ. ಪಾಮರರಿಂದ ಹಿಡಿದು ಪಂಡಿತರವರೆಗೆ ಇದು ತಮ್ಮ ಮಹತ್ಪ್ರಭಾವವನ್ನು
ಬೀರಿದೆ.
ತಮಿಳರು ತಿರುಕ್ಕುರಳನ್ನು ವೇದವೆಂದು ಪರಿಗಣಿಸುತ್ತಾರೆ. ಅದುದರಿಂದ ತಮಿಳು ವೇದವೆಂದೂ
ಪ್ರಚಲಿತವಿದೆ.
ತಿರುವಳ್ಳುವರು ಧರ್ಮ ಸೂಕ್ಷ್ಮವನ್ನು ವ್ಯವಹಾರಿಕವಾಗಿ ಜೀವನಕ್ಕೆ ಅನುಕೂಲವಾಗುವಂತೆ
ಸಂಕ್ಷೇಪಿಸಿದ್ದಾರೆ. ಮಾನವ ಮಾನವನಾಗಿ ಬದುಕುವುದು ಹೇಗೆ ಎಂಬುದಕ್ಕೆ ವಿವರಣೆಗಳನ್ನು
ನೀಡಿದ್ದಾರೆ. ಜೀವನದ ಆಗುಹೋಗುಗಳ ಮಧ್ಯದಲ್ಲಿ ಹೇಗೆ ಬದುಕಬೇಕು ಎಂಬುದರ ಮೇಲೆ ಬೆಳಕನ್ನು
ಬೀರಿದ್ದಾರೆ. ಧರ್ಮ ಯಾವುದು? ಎಂಬುದನ್ನು ವಿವರಿಸಿದ್ದಾರೆ. ಮಾನವ ಜೀವನದ ಧರ್ಮವನ್ನು
ಇದು ಎತ್ತಿ ಹಿಡಿದಿರುವುದರಿಂದ ಇದೊಂದು.
"ಜೀವನ ಧರ್ಮ ದೀಪಿಕೆ".
|